ಮಿಸ್ಟರ್ ನಟ್ವರಲಾಲ್ ರಂಗನ ಮೈಂಡ್ ಗೇಮ್ ಆಟ... - ರೇಟಿಂಗ್ : 3/5 ***
Posted date: 25 Sun, Feb 2024 06:08:51 PM
ತನ್ನ ಚಾಣಾಕ್ಷತನದಿಂದ ಯಾರನ್ನು ಬೇಕಾದರೂ  ನಂಬಿಸಿ, ಕೆಲಸ ಮಾಡಿಕೊಳ್ಳುವಂಥ ಚಾಣಾಕ್ಷ   ವ್ಯಕ್ತಿಯೊಬ್ಬನ ಸುತ್ತ ನಡೆಯುವ ಕಥೆಯನ್ನು ನಿರ್ದೇಶಕ ಲವ ಅವರು ಮಿಸ್ಟರ್ ನಟವರಲಾಲ್ ಚಿತ್ರದಲ್ಲಿ ಹೇಳಿದ್ದಾರೆ. ಆತ ತನ್ನ  ಜೀವನದಲ್ಲಿ ಎದುರಿಸಿದಂಥ   ನೋವು , ನಲಿವು , ಅವಮಾನ, ಗೆಳೆತನ, ಪ್ರೀತಿ, ವಂಚಕರ ಜಾಲ , ಹ್ಯಾಕರ್ಸ್ಗಳ ತಂತ್ರಗಾರಿಕೆ  ಎಲ್ಲವನ್ನೂ  ಕಳ್ಳ ಪೊಲೀಸ್ ಆಟದಲ್ಲಿ ಸಾಗುವ ಕಥಾನಕದಲ್ಲಿ  ಈವಾರ ಬೆಳ್ಳಿತೆರೆಗೆ ಬಂದಿರುವ ಮಿಸ್ಟರ್ "ನಟ್ವರ್ ಲಾಲ್"ಸಿನಿಮಾ ಮೂಲಕ ಹೇಳಿದ್ದಾರೆ.  
 
ಹೆಣ್ಣುಮಕ್ಕಳ ಬಂಜೆತನ ನಿವಾರಣೆಯ ವಿಷಯದಲ್ಲಿ  ದೊಡ್ಡ ದಂದೆಯೇ ನಡೆಯುತ್ತಿರುವುದು  ತಿಳಿದೇ ಇದೆ. ಇದರ ಪ್ರಮುಖ ರೂವಾರಿ ಗೋಡ್ಸೆ. ಅವನು ಹೇಳಿದಂತೆ ಸ್ಪರ್ಮ್ ಶೇಖರಣೆ  ಮಾಡಿ, ಅದನ್ನು ಅದಲು ಬದಲು ಮಾಡಿ  ಪತಿ ಪತ್ನಿಯ  ನಡುವೆ ಜಗಳ ತಂದಿಟ್ಟು  ನಂತರ ಅವರಿಗೆ  ಬ್ಲಾಕ್ ಮೇಲ್  ಮಾಡಿಸುವ  ಡಾಕ್ಟರ್ ಶೆಟ್ಟಪ್ಪ ,  ಇದಕ್ಕೆ ಸಹಕಾರ ನೀಡುವ ಪಿಎಸ್ಐ ಶೌರಿ. ಹ್ಯಾಕರ್ಸ್ ಗಳ ಕಾರ್ಯತಂತ್ರದ ಮೂಲಕ ಪಾತಕಿ, ಡಾಕ್ಟರ್ ಹಾಗೂ ಪಿಎಸ್ಐ ಕೊಲೆ ಮಾಡುವ ಹ್ಯಾಕರ್(ತನುಷ್ ಶಿವಣ್ಣ).  ಈ ಕೇಸನ್ನ ಪತ್ತೆಹಚ್ಚಲು ಬರುವ ಪೊಲೀಸ್ ಅಧಿಕಾರಿ( ರಾಜೇಶ್ ನಟರಂಗ). ತನ್ನ ತಂಡ ಕಟ್ಟಿಕೊಂಡು ಸೈಬರ್ ಕ್ರೈಂ  ತಂತ್ರಗಾರಿಕೆಯ ಜಾಲದಲ್ಲಿ ನಾನಾ ದೃಷ್ಟಿಕೋನದಿಂದ ಹುಡುಕುತ್ತಾ ಹಲವರನ್ನ ವಿಚಾರಣೆ ಮಾಡಿದರೂ  ಯಾವುದೇ ಪ್ರಯೋಜನವಾಗುವುದಿಲ್ಲ. 
 
ಇನ್ನೇನು ಕೈಗೆ ಸಿಕ್ಕರು ಎನ್ನುವಷ್ಟರಲ್ಲಿ ಎಸ್ಕೇಪ್ ಆಗುತ್ತಿರುತ್ತಾರೆ, ಒಮ್ಮೆ  ಗೆಳೆಯನೊಬ್ಬ ಸಿಕ್ಕಿ ಹಾಕಿಕೊಳ್ಳುತ್ತಾನೆ. ಇವನಿಂದ ಸತ್ಯ ಹೊರತೆಗೆಯಲು  ಪೊಲೀಸರು ಹರಸಾಹಸ  ಮಾಡಬೇಕಾಗುತ್ತದೆ. ಇದರ ನಡುವೆ ಒಂದು ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಆ ಊರ ಗೌಡನಿಗೆ ಇಬ್ಬರು ಹೆಂಡತಿಯರು, ಈತನ ಎರಡನೇ ಹೆಂಡತಿಯ ಮಗ ರಂಗ (ತನುಷ್ ಶಿವಣ್ಣ). ಈ ರಂಗನ ಬದುಕಿನಲ್ಲಿ  ಮುದ್ದಾದ ಬೆಡಗಿ ನಂದು( ಸೋನಾಲ್ ಮೊಂತೆರೊ) ಪ್ರವೇಶ. ಇಬ್ಬರ ನಡುವೆ  ಪರಸ್ಪರ ಸ್ನೇಹ, ಪ್ರೀತಿ, ಓಡಾಟ. ಮೊದಲ ಹೆಂಡತಿ ಮಕ್ಕಳ ವಿರೋಧದ ನಡುವೆ ರಂಗ ಹಾಗೂ ಅವನ ತಾಯಿ ಊರು ಬಿಡುವ ಪರಿಸ್ಥಿತಿ ಬರುತ್ತದೆ. ನಂತರ ಸ್ವಾಮೀಜಿಗಳ ಆಶ್ರಯದಲ್ಲಿ ಜೀವನ ನಡೆಸುವ ತಾಯಿ, ಮಗ. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ ನಡೆಯೋ ದುರಂತ ಸಾವುಗಳು. ಇದರ ಹಿಂದೆ  ಕಾಣದ ಕೈಗಳ ದೊಡ್ಡ ಷಡ್ಯಂತ್ರವೇ ತುಂಬಿಕೊಂಡಿರುತ್ತದೆ. ಜೀವನವೇ ಸಾಕು ಎನ್ನುವ ರಂಗ(ತನುಷ್ )ನಿಗೆ ಧೈರ್ಯ ತುಂಬುವ ಗೆಳೆಯ ಪ್ರಕಾಶ್ (ನಾಗ್ ಭೂಷಣ್). ಈ ದುಷ್ಟರನ್ನು ಸದೆ ಬಡಿಯಲು  ನಟ್ವರ್ ಲಾಲ್  ನಂತೆ ಮಾಸ್ಟರ್ ಪ್ಲಾನ್ ಮಾಡಿ ಆ ಮೂಲಕ ಹ್ಯಾಕರ್ಸ್ ಜಾಲವನ್ನು ಪತ್ತೆ ಹಚ್ಚಲು ಮುಂದಾಗುತ್ತಾರೆ, ಮುಂದೆ  ಚಿತ್ರದ ಕ್ಲೈಮಾಕ್ಸ್ ಹೇಗಿರುತ್ತೆ, ಚಿತ್ರಕಥೆ ಮುಂದೆ  ಯಾವ ಟ್ವಿಸ್ಟ ಪಡೆದುಕೊಳ್ಳುತ್ತೆ ಇದನ್ನೆಲ್ಲ ತಿಳಿಯಬೇಕೆಂದರೆ  ನೀವು ಮಿಸ್ಟರ್ ನಟ್ವರ್ ಲಾಲ್ ಚಿತ್ರವನ್ನು ಥೇಟರಿನಲ್ಲೇ  ನೋಡಬೇಕು.
 ಸಮಾಜದಲ್ಲಿ ನಡೆಯುತ್ತಿರುವ ದುಷ್ಟರ ಮೋಸದ ಜಾಲ,  ಹಣ ಆಸ್ತಿಗಾಗಿ ಮಾಡುವ ಅಪರಾಧಗಳು, ತಂದೆ ತಾಯಿಯ ಪ್ರೀತಿ, ಅಣ್ಣ-ತಮ್ಮಂದಿರ ಸಂಬಂಧ, ಸ್ನೇಹಿತನ ಸಹಕಾರ, ಮೋಸಕ್ಕೆ ಇನ್ನೊಂದು ತಂತ್ರಗಾರಿಕೆಯೇ ಉಪಾಯ ಎನ್ನುವ ನಿಟ್ಟಿನಲ್ಲಿ ಒಂದಷ್ಟು ವಿಚಾರವನ್ನು ತೆರೆ ಮೇಲೆ ತರಲಾಗಿದೆ. ಚಿತ್ರದ ಸೆಕೆಂಡ್ ಹಾಫ್  ಕುತೂಹಲವಾಗಿ ಸಾಗುತ್ತದೆ. ಇನ್ನು  ಚಿತ್ರದ ಹಾಡುಗಳಿಗಿಂತ ಧರ್ಮವಿಷ್ ಅವರ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.
 
ಛಾಯಾಗ್ರಾಹಕ ವಿಲಿಯಂ ಡೇವಿಡ್ ಅವರ  ಕೈಚಳಕ ಉತ್ತಮವಾಗಿದೆ. ಇಡೀ  ಚಿತ್ರದ ಕೇಂದ್ರ ಬಿಂದು ನಾಯಕ ತನುಷ್ ಶಿವಣ್ಣ. ತಮ್ಮ  ಪಾತ್ರಕ್ಕೆ ಜೀವತುಂಬಲು ಬಹಳಷ್ಟು ಶ್ರಮ ಹಾಕಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ನಾಯಕಿ  ಸೋನಾಲ್ ಮೊಂತೆರೊ ತನ್ನ  ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಗೆಳೆಯನಾಗಿ  ನಾಗಭೂಷಣ ಸಿಕ್ಕ ಅವಕಾಶದಲ್ಲಿ ಜೀವ ತುಂಬಿದ್ದಾರೆ.
 
ಪೊಲೀಸ್ ಅಧಿಕಾರಿಯಾಗಿ ರಾಜೇಶ್ ನಟರಂಗ ಗಮನ ಸೆಳೆಯುತ್ತಾರೆ.  ಉಳಿದಂತೆ ಕಾಕ್ರೋಜ್ ಸುಧಿ, ಯಶ್ ಶೆಟ್ಟಿ , ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed